ಡಾಲರೈಟ್
	ಭಾರವಾದ ಕಪ್ಪುಬಣ್ಣದ ಅಗ್ನಿಶಿಲೆ. ಇದರಲ್ಲಿರುವ ಮುಖ್ಯ ಖನಿಜಗಳೆಂದರೆ ಪ್ಲೇಜಿಯೋಕ್ಲೇಟ್ ಫೆಲ್ಸ್‍ಪಾರ್ ಮತ್ತು ಅಗೈಟ್, ಡಯಾಪ್ಸೈಡ್, ಕಬ್ಬಿಣದ ಆಕ್ಸೈಡ್. ಇದು ಸಾಮಾನ್ಯವಾಗಿ ಪ್ರಪಂಚದ ಎಲ್ಲ ಭಾಗದಲ್ಲೂ ಹೇರಳವಾಗಿ ದೊರೆಯುತ್ತದೆ. ಇತರ ಶಿಲೆಗಳನ್ನು ಅಡ್ಡಹಾಯ್ದು ಇದು ಅಂತಸ್ಥರಣ ಡೈಕ್ ಶಿಲೆಯರೂಪದಲ್ಲಿರುವುದು. ಕಪ್ಪು ಬೂದು ಛಾಯೆಯಿಂದ ಕಪ್ಪುವರ್ಣದವರೆಗೆ ವ್ಯತ್ಯಾಸವಾಗುವ ಈ ಡೈಕುಗಳನ್ನು ಕೆಲವೆಡೆ ಕಟ್ಟಡಗಳಿಗಾಗಿ ಉಪಯೋಗಿಸುವುದುಂಟು. ಅದರಲ್ಲಿಯೂ ವಿದೇಶಗಳಲ್ಲಿ ಇದನ್ನು ಅಲಂಕಾರ ಕಟ್ಟಡಶಿಲೆಯಾಗಿ ಉಪಯೋಗಿಸುತ್ತಾರೆ. ಭೂಮಿಯ ಮೇಲ್ಭಾಗದಲ್ಲಿ ಇಂಥ ಡೈಕುಗಳು ದಪ್ಪದಪ್ಪ ಗುಂಡುಗಳ ಉದ್ದಸರಣಿ ಅಥವಾ ಏರಿಗಳಂತೆ ಕಂಡುಬರುತ್ತವೆ. ಗುಂಡುಗಳ ಮೇಲ್ಭಾಗದಲ್ಲಿ ಸಾಧಾರಣವಾಗಿ ಒಂದೆರಡು ಇಂಚು ದಪ್ಪವಿರುವ ಹಳದಿಕಂದುಬಣ್ಣದ ಸಹಜಲಆಕ್ಸೈಡಿನ ಶಿಥಿಲೀಕರಣಕ್ಕೆ ಒಳಗಾಗದ ಶುಭ್ರ ಡೈಕ್ ಶಿಲೆಯಿರುತ್ತದೆ. ಇದಕ್ಕೆ ಮೆರುಗಿಟ್ಟರೆ ಚೆನ್ನಾಗಿ ಹೊಳಪಿನಿಂದ ಮಿರುಗುತ್ತದೆ. ಫೆಲ್ಸ್‍ವಾರಿನ ಬೃಹತ್ ಸ್ಫಟಿಕಗಳಿರುವ ಡಾಲರೈಟುಗಳನ್ನು ಮೆರುಗಿಟ್ಟಲ್ಲಿ ಅವುಗಳಲ್ಲಿರುವ ಫೆಲ್ಸ್‍ಪಾರ್ ಹರಳುಗಳು ಪ್ರಕಾಶಮಾನವಾಗಿ ಹೊಳೆಯುತ್ತವೆ. ಕರ್ನಾಟಕದಲ್ಲೂ ಇಂಥ ಡೈಕುಗಳು ಅನೇಕ ಕಡೆಗಳಲ್ಲಿವೆ. ಉತ್ತಮ ಬಗೆಯ ಗ್ರಾನೈಟ್ ಮತ್ತು ನೈಸ್ ಶಿಲೆಗಳು ಹೇರಳವಾಗಿ ದೊರೆಯುವುದರಿಂದ ಡಾಲರೈಟಿನ ಉಪಯೋಗ ಕಡಿಮೆ.
(ಟಿ.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ